ವಿಜಯನಗರ : ತುಂಗಭದ್ರಾ ನದಿಯ ಒಡಲು ಬರಿದಾಗಿದ್ದ ಪರಿಣಾಮ ಈ ಬಾರಿ ನೀರಿಲ್ಲದೇ ಬರಿದಾಗಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ವಿರುಪಾಪುರ ಗಡ್ಡೆಯಿಂದ ಕಾಲ್ನಡಿಗೆಯಲ್ಲೇ ಹಂಪಿಯ ಪಂಪಾ ವಿರೂಪಾಕ್ಷೇಶ್ವರನ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
2017ರ ನಂತರದ ಇದೇ ಮೊದಲ ಬಾರಿಗೆ ನದಿಯ ಒಡಲು ಬರಿದು:
ಜಿಲ್ಲೆಯ ವಿರುಪಾಪುರ ಗಡ್ಡೆ ಮಾರ್ಗವಾಗಿ ಹಂಪಿ ತಲುಪಲು ಇದುವರೆಗೂ ಬೋಟ್ಗಳನ್ನು ನೆಚ್ಚಿಕೊಳ್ಳಲಾಗಿತ್ತು. ಅರ್ಧ ಕಿಮೀ ದೂರದಲ್ಲಿರುವ ತುಂಗಭದ್ರಾ ನದಿಯನ್ನು ಬೋಟ್ಗಳ ಮೂಲಕ ಸುಲಭವಾಗಿ ದಾಟಿ ಹೋಗಬಹುದಾಗಿತ್ತು. ಆದರೆ, ಸದ್ಯ ಸಮಯಕ್ಕೆ ಸರಿಯಾಗಿ ಮಳೆ ಬಾರದ್ದರಿಂದ ತುಂಗಭದ್ರಾ ನದಿ ಸಂಪೂರ್ಣ ಬರಿದಾಗಿದೆ. 2017ರ ನಂತರದಲ್ಲಿಇದೇ ಮೊದಲ ಬಾರಿಗೆ ನದಿಯ ಒಡಲು ಬತ್ತಿಹೋಗಿದೆ.
ಪ್ರವಾಸಕ್ಕಾಗಿ ಬರುವ ವಿದೇಶಿಗರು, ದೇಶಿ ಪ್ರವಾಸಿಗರು ಹಂಪಿ ವೀಕ್ಷಣೆ ಬಳಿಕ, ಗಂಗಾವತಿ ತಾಲೂಕಿನಲ್ಲಿಇರುವ ಅಂಜನಾದ್ರಿ ಪರ್ವತ, ಪಂಪಾ ಸರೋವರ, ಋುಷಿಮುಖ ಪರ್ವತ, ಆನೆಗೊಂದಿಯ ರಂಗನಾಥ ದೇವಸ್ಥಾನ ಹಾಗೂ ಪ್ರವಾಸಿ ಸ್ಥಳಗಳಾದ ಸಣಾಪುರ ಕೆರೆ, ಸಣಾಪುರ ಫಾಲ್ಸ್ ಸೇರಿ ನಾನಾ ಸ್ಥಳಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಬೋಟ್ಗಳ ಸಹಾಯವಿಲ್ಲದೆ ಕೆಲವೇ ನಿಮಿಷಗಳಲ್ಲಿ ಕಾಲ್ನಡಿಗೆಯಲ್ಲೇ ಹಂಪಿ ತಲುಪಬಹುದಾಗಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಹಂಪಿ ವೀಕ್ಷಣೆಗೆ ಬರುತ್ತಿದ್ದೇವೆ. ಆದರೆ, ನದಿ ಖಾಲಿ ಆಗಿರುವುದನ್ನು ನೋಡಿರಲಿಲ್ಲ. ಪ್ರತಿ ಬಾರಿ ಹಂಪಿಗೆ ಹೋಗಲು ಬೋಟ್ಗಳ ಸಹಾಯ ಪಡೆಯುತ್ತಿದ್ದೇವು. ಆದರೆ, ಈ ಬಾರಿ ಕಾಲ್ನಡಿಗೆಯಲ್ಲೇ ಸುಲಭವಾಗಿ ದಡ ತಲುಪಿದ್ದೇವೆ ಎಂದು ಪ್ರವಾಸಿಗರು ಹೇಳಿದ್ದಾರೆ.