ಜೂನ್ 5 ರಿಂದ ಸಾರ್ವಜನಿಕರ ವೀಕ್ಷಣೆಗಾಗಿ ಬೆಟಗೇರಿಯ 3ಡಿ ಆ್ಯಕ್ಟಿವ್ ತಾರಾಲಯ

ಸಮಗ್ರ ಪ್ರಭ ಸುದ್ದಿ
2 Min Read

ಗದಗ : ಬೆಟಗೇರಿಯ ಹೆಲ್ತಕ್ಯಾಂಪನಲ್ಲಿ ನಿರ್ಮಾಣಗೊಂಡಿರುವ ಮಕ್ಕಳಿಗೆ ಖಗೋಳ ಜ್ಞಾನ ದೊರಕಿಸಿಕೊಡುವುದಕ್ಕೆ ನಿರ್ಮಿಸಲಾಗಿರುವ 3ಡಿ ಆ್ಯಕ್ಟಿವ್ ತಾರಾಲಯವನ್ನು ಜೂನ್ 5 ರಿಂದ ಮಕ್ಕಳು ಹಾಗೂ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಕೋರಿದ್ದಾರೆ.

ಬೆಟಗೇರಿಯಪಾಲಾ ಬಾದಾಮಿ ರಸ್ತೆಯಲ್ಲಿರುವ ಕೆ.ಸಿ. ರಾಣಿ ಪಾರ್ಕ ಎದುರಿಗೆ 3ಡಿ ಆ್ಯಕ್ಟಿವ್ ತಾರಾಲಯವನ್ನು ನಿರ್ಮಿಸಿ ಮಾರ್ಚ 19 ರಂದು ಉದ್ಘಾಟನೆಗೊಳಿಸಲಾಗಿದೆ. ನಂತರದಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಖಗೋಳ ಜ್ಞಾನವನ್ನು ಉಣಬಡಿಸಲು ಉಚಿತ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.

ಜೂನ್ 5 ರಿಂದ ತಾರಾಲಯದಲ್ಲಿ ಪ್ರತಿದಿನ 4 ಪ್ರದರ್ಶನಗಳು ನಡೆಯಲಿವೆ. ಬೆಳಿಗ್ಗೆ 10 ಗಂಟೆ, ಮಧ್ಯಾಹ್ನ 12 ಗಂಟೆ, ಮ.2.30 ಹಾಗೂ ಸಂಜೆ 4 ಗಂಟೆಗೆ ಪ್ರತಿದಿನ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಪ್ರತಿಯೊಬ್ಬ ಸಾರ್ವಜನಿಕರಿಗೆ 100 ರೂ ಟಿಕೆಟ್ ದರವನ್ನು ಹಾಗೂ ಮಕ್ಕಳಿಗೆ 70 ರೂ. ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಹವಾನಿಯಂತ್ರಿತ ಡಿಜಿಟಲ್ ಆ್ಯಕ್ಟಿವ್ 3ಡಿ ತಾರಾಲಯವು 65 ಆಸನಗಳನ್ನು ಹೊಂದಿದ್ದು, ಅರ್ಧ ಗಂಟೆ ಅವಧಿಯ ದೃಶ್ಯಾವಳಿಗಳನ್ನು ಒಂದು ಅವಧಿಯಲ್ಲಿ 65 ಜನರು ವೀಕ್ಷಿಸಬಹುದಾಗಿದೆ. ಪ್ರತಿಯೊಬ್ಬರಿಗೂ ಆಕ್ಟಿವ್ 3ಡಿ ಗ್ಲಾಸ್ ಲಭ್ಯವಿದ್ದು, ದೃಶ್ಯಾವಳಿಗಳ ಜೊತೆಗೆ ಸಾಗಿದ ಅನುಭವ ಉಂಟಾಗಲಿದೆ.

3 ಡಿ ಆ್ಯಕ್ಟಿವ್ ತಾರಾಲಯದಲ್ಲಿ ಪ್ರದರ್ಶನಗೊಳ್ಳುವ ವಿಜ್ಞಾನ ವಿಷಯ ಹಾಗೂ ಖಗೋಳ ಶಾಸ್ತ್ರ ವಿಡಿಯೋಗಳು ವೀಕ್ಷಕರ ಮನಮುಟ್ಟುವಂತೆ ಪ್ರದರ್ಶನಗೊಳ್ಳಲಿವೆ. ಖಗೋಳ ಶಾಸ್ತ್ರ, ರಾಕೆಟ್ ಉಪಗ್ರಹಗಳ ಕಾರ್ಯಾಚರಣೆ ಸೌರಮಂಡಲ ರಚನೆ, ಕಾರ್ಯಾಚರಣೆ, ಗ್ರಹಗಳ ಚಲನವಲನ, ವಿವಿಧ ಗ್ರಹಗಳಲ್ಲಿನ ವಾತಾವರಣ ಸೇರಿದಂತೆ ಖಗೋಳ ಶಾಸ್ತ್ರದ ಸಂಪೂರ್ಣ ವಿವರ ಈ ತಾರಾಲಯದಲ್ಲಿ ನೋಡುಗರಿಗೆ ಲಭ್ಯವಿದೆ.

ನಿರ್ಮಿತಿ ಕೇಂದ್ರದಿಂದ 3.28 ಕೋಟಿ ರೂ.ವೆಚ್ಚದಲ್ಲಿ ತಾರಾಲಯದ ಕಟ್ಟಡ ನಿರ್ಮಾಣಗೊಂಡರೆ, ಹುಬ್ಬಳ್ಳಿಯ ವರ್ಣಾಜ್ ಟೆಕ್ನಾಲಾಜಿ ಸಂಸ್ಥೆಯು 4.8 ಕೋಟಿ ರೂ. ವೆಚ್ಚದಲ್ಲಿ ತಂತ್ರಜ್ಞಾನಗಳನ್ನು ಅಳವಡಿಸಿದೆ. ಒಟ್ಟು 8.08 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಆ್ಯಕ್ಟಿವ್ 3ಡಿ ತಾರಾಲಯ ನಿರ್ಮಾಣಗೊಂಡಿದೆ.

ವಿಜ್ಞಾನ ಶಿಕ್ಷಕರು ಹಾಗೂ ಜನಪ್ರತಿನಿಧಿಗಳ ಶ್ರಮದ ಫಲವಾಗಿ ಆ್ಯಕ್ಟಿವ್ 3ಡಿ ತಾರಾಲಯ ನಿರ್ಮಾಣಗೊಂಡಿದ್ದು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ತಿಳಿಸಿದ್ದಾರೆ.

Share this Article