ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 237ಕ್ಕೆ ಏರಿಕೆ 900 ಗಾಯಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ,ಮುಂದುವರೆದ ರಕ್ಷಣಾ ಕಾರ್ಯ

graochandan1@gmail.com
2 Min Read

 

ಬಾಲಸೋರ್: ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 237ಕ್ಕೆ ಏರಿಕೆಯಾಗಿದೆ. ಸುಮಾರು 900 ಮಂದಿ ಗಾಯಗೊಂಡಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಚೆನ್ನೈ ಮತ್ತು ಪಶ್ಚಿಮ ಬಂಗಾಳದ ಶಾಲಿಮರ್ ನಿಲ್ದಾಣದ ನಡುವೆ ಸಂಚರಿಸುತ್ತದೆ. ಬೆಂಗಳೂರಿನ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ಪ್ರಯಾಣಿಕ ರೈಲಿಗೆ ಡಿಕ್ಕಿ ಹೊಡೆದ ಬಳಿಕ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಅನೇಕ ಬೋಗಿಗಳು ಹಳಿ ತಪ್ಪಿವೆ. ಇದರಿಂದಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಬಹಾಂಗ ರೈಲ್ವೆ ನಿಲ್ದಾಣದ ಸಮೀಪ ಈ ದುರಂತ ಸಂಭವಿಸಿದೆ.

ರೈಲು ಅಪಘಾತಕ್ಕೆ ಮೂಲ ಕಾರಣ ತಿಳಿದುಕೊಳ್ಳಲು ತನಿಖೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಂತ ಭೀಕರ ರೈಲು ಅಪಘಾತ ಇದಾಗಿದೆ. ಕೆಲವು ವರ್ಷಗಳಿಂದ ರೈಲು ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿತ್ತು.

- Advertisement -
Ad image

ರಕ್ಷಣಾ ಕಾರ್ಯಾಚರಣೆಗಳು ತ್ವರಿತವಾಗಿ ನಡೆಯುತ್ತಿವೆ. ಸಮೀಪದ ಜಿಲ್ಲೆಗಳ ಆಸ್ಪತ್ರೆಗಳು ಸಕಲ ಸಿದ್ಧತೆಯೊಂದಿಗೆ ತಯಾರಾಗಿ ಇರುವಂತೆ ಸೂಚನೆ ನೀಡಲಾಗಿದೆ. ಮೂರು ಎನ್‌ಡಿಆರ್‌ಎಫ್ ಘಟಕಗಳು, 4 ಒಡಿಶಾ ವಿಪತ್ತು ಪರಿಹಾರ ಕ್ರಿಯಾ ಪಡೆ ಘಟಕಗಳು, 15ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು, 200 ಪೊಲೀಸ್ ಸಿಬ್ಬಂದಿ ಹಾಗೂ 60 ಆಂಬುಲೆನ್ಸ್‌ಗಳು ಸ್ಥಳದಲ್ಲಿವೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ತಿಳಿಸಿದ್ದಾರೆ.

ರೈಲ್ವೆ ಹಳಿಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪ್ರಯಾಣಿಕರ ತುಂಡಾದ ಹಾಗೂ ರಕ್ತಸಿಕ್ತವಾದ ದೇಹಗಳ ದೃಶ್ಯ ಎದೆನಡುಗಿಸುವಂತಿತ್ತು. ಅನೇಕ ಬೋಗಿಗಳು ಪಲ್ಟಿಯಾಗಿ ಬಿದ್ದಿರುವುದರಿಂದ ಅವುಗಳಿಂದ ಮೃತದೇಹ ಹಾಗೂ ಗಾಯಾಳುಗಳನ್ನು ಹೊರತೆಗೆಯುವ ಕಾರ್ಯ ಸುಲಭವಾಗಿಲ್ಲ. ಅಲ್ಲದೆ ಕಗ್ಗತ್ತಲ ರಾತ್ರಿಯಲ್ಲಿ ಕಾರ್ಯಾಚರಣೆ ಕ್ಲಿಷ್ಟಕರವಾಗಿತ್ತು. ಕಂಪಾರ್ಟ್‌ಮೆಂಟ್‌ಗಳ ಅಡಿಯಲ್ಲಿ ಇನ್ನಷ್ಟು ಜನರು ಸಿಲುಕಿರುವ ಸಾಧ್ಯತೆ ಇದೆ.

ಮೃತರು, ಗಾಯಾಳುಗಳಿಗೆ ಪರಿಹಾರ:  

“ಯಥಾಸ್ಥಾಪನೆ ಕಾರ್ಯವನ್ನು ತಕ್ಷಣವೇ ನಡೆಸಲಾಗುವುದು. ಸಿಬ್ಬಂದಿ ಹಾಗೂ ಸಲಕರಣೆಗಳು ಈ ಕಾರ್ಯಾಚರಣೆಗೆ ಸಿದ್ಧವಾಗಿವೆ. ಆದರೆ ನಮ್ಮ ಮೊದಲ ಆದ್ಯತೆ ಗಾಯಾಳುಗಳ ರಕ್ಷಣೆ ಹಾಗೂ ಅವರಿಗೆ ವೈದ್ಯಕೀಯ ನೆರವು ನೀಡುವುದು” ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಮೃತರ ಪ್ರತಿ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 2 ಲಕ್ಷ ರೂ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ ತಲಾ 50 ಸಾವಿರ ರೂ ಪರಿಹಾರ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ.

ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಮತ್ತು ಗಾಯಾಳುಗಳುಗೆ 50 ಸಾವಿರ ರೂ ಪರಿಹಾರ ಪ್ರಕಟಿಸಿದ್ದಾರೆ. ಅನೇಕ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

Share this Article