ಗದಗ : ಗದಗ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ಮೇ. 10 ರಂದು ಶಾಂತಿಯುತವಾಗಿ ಮತದಾನ ಜರುಗಿದ್ದು, ಮೇ.13 ರಂದು ಬೆಳಿಗ್ಗೆ 8 ರಿಂದ ಗದಗ ನಗರದ ತೋಂಟದಾರ್ಯ ಇಂಜನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಶುಕ್ರವಾರ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಮತಎಣಿಕೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗದಗ ಮತಎಣಿಕೆ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಕಾನೂನು ಸುವ್ಯಸ್ಥೆಗೆ ಭಂಗ ಉಂಟಾದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮತ ಎಣಿಕೆ ಆರಂಭದಲ್ಲಿ ಅಂಚೆಮತಪತ್ರಗಳ ಎಣಿಕೆ ಆರಂಭವಾಗುತ್ತದೆ. ಮತ್ತು ಸ್ವಲ್ಪ ಸಮಯದ ನಂತರ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳ ಎಣಿಕಾ ಕಾರ್ಯ ಆರಂಭಿಸಲಾಗುತ್ತದೆ. ಪ್ರತಿ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಗೆ ಪ್ರತ್ಯೇಕ ಕೊಠಡಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ ಎಲ್ ಅವರು ಹೇಳಿದರು.
ಮತ ಎಣಿಕೆ ಕೇಂದ್ರ :
ಗದಗ ನಗರದ ತೋಂಟದಾರ್ಯ ಇಂಜನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಮೇ 13 ರಂದು ಬೆಳಿಗ್ಗೆ ನಡೆಯಲಿದ್ದು, ಕಟ್ಟಡದ ನೆಲ ಮಹಡಿಯಲ್ಲಿ ನರಗುಂದ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಮೊದಲ ಮಹಡಿಯಲ್ಲಿ ರೋಣ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ ಜರುಗಲಿದೆ. ಹಾಗೂ ಕಟ್ಟಡದ ಎರಡನೇ ಮಹಡಿಯಲ್ಲಿ ಗದಗ ಮತ್ತು ಶಿರಹಟ್ಟಿ ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಗಳು ನಡೆಯಲಿವೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಏಜೆಂಟ್ ಗಳ ಸಮ್ಮುಖದಲ್ಲಿ ಮತ ಎಣಿಕೆ ಮಾಡಲಾಗುವುದು ಪ್ರತಿಯೊಂದು ಮತ ಎಣಿಕೆ ಕೇಂದ್ರಕ್ಕೆ ಹಾಗೂ ಪ್ರತಿ ಟೇಬಲ್ ಗೆ ಸಿ ಸಿ ಟಿವಿ ಅಳವಡಿಸಲಾಗಿದೆ ಎಂದು ಹೇಳಿದರು.