ಗದಗ: ಐವತ್ತೈದು ವರ್ಷಗಳ ಕಾಲ ಗದಗನಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಇಷ್ಟಾದರೂ ಗದಗ-ಬೆಟಗೇರಿ ಜನರಿಗೆ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕುಡಿಯುವ ನೀರು ಕೊಡದವರಿಗೆ ನೀರು ಕುಡಿಸಿ, ಇಲ್ಲದಿದ್ದರೆ ಮೈಯಲ್ಲಿರುವ ನೀರು ಇಳಿಸಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾರ್ಮಿಕವಾಗಿ ನುಡಿದರು.
ಶುಕ್ರವಾರ ಗದಗ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಅವರ ಪರ ಗದಗ-ಬೆಟಗೇರಿ ಅವಳಿ ನಗರದ ವಿವಿಧೆಡೆ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಕ್ಷೇತ್ರದ ಜನರ ಸಹಕಾರದಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿರುವ ಅನೀಲ್ ಮೆಣಸಿನಕಾಯಿ ಈ ಬಾರಿ ಗೆಲ್ಲಲಿದ್ದಾರೆ. ಗೆದ್ದು ಬಂದ ಮೇಲೆ ಅವಳಿ ನಗರದ ಜ್ವಲಂತ ಸಮಸ್ಯೆಯಾಗಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂದು ಭರವಸೆ ನೀಡಿದರು.
ಬಿಜೆಪಿ ಮೇಲೆ ಯಾವುದೇ ಅರೋಪವಿಲ್ಲದಿದ್ದರೂ ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗರು ಭ್ರಷ್ಟಾಚಾರಿಗಳು, ಸುಳ್ಳುಕೋರರು. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿದ್ದಾರೆ. ಜಗತ್ತಿನಲ್ಲಿಯೇ ಭಾರತ ಐದನೇ ಆರ್ಥಿಕತೆಯ ರಾಷ್ಟ್ರವಾಗಿದ್ದು, 2028 ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಲಿದೆ.ಅಲ್ಲದೇ, 2047ರವರೆಗೂ ಬಿಜೆಪಿ ಸರ್ಕಾರ ಬರಲಿದೆ. ಕರ್ನಾಟಕದಲ್ಲೂ ದೇಶದಲ್ಲಾದಂತೆ ಅಭಿವೃದ್ಧಿ ಕೆಲಸಗಳಾಗುತ್ತವೆ.
ಉಕ್ರೇನ್ ರಷ್ಯಾ ಯುದ್ಧದಿಂದಾಗಿ ಗ್ಯಾಸ್ ತುಸು ತುಟ್ಟಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ವರ್ಷಕ್ಕೆ ಮೂರು ಉಚಿತ ಸಿಲಿಂಡರ್ ಕೊಡಲಿದ್ದೇವೆ. ತಲಾ ಐದು ಕೆಜಿ ಅಕ್ಕಿ, ದವಸ ಧಾನ್ಯಗಳನ್ನು ನೀಡಲಿದ್ದೇವೆ. ನಯಾಪೈಸೆ ತೆಗೆದುಕೊಳ್ಳದೇ 120 ಕೋಟಿಗೂ ಅಧಿಕ ಉಚಿತ ಕೋವಿಡ್ ಲಸಿಕೆ ಕೊಟ್ಟಿದ್ದೇವೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ದೇಶದಲ್ಲಿ ಮೂರುವರೆ ಕೋಟಿ ಮನೆಗಳನ್ನು ಕೊಟ್ಟಿದ್ದೇವೆ. ಹರ್ ಘರ್ ನಲ್ ಯೋಜನೆಯಡಿ ಪ್ರತಿ ಮನೆಗೂ ನಲ್ಲಿಗಳ ಮೂಲಕ ಕುಡಿಯುವ ನೀರು ಒದಗಿಸಿದ್ದೇವೆ ಎಂದು ತಿಳಿಸಿದ ಜೋಶಿಯವರು, ಡಬಲ್ ಇಂಜಿನ್ ಸರ್ಕಾರಗಳ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಕೆ.ಎಚ್.ಪಾಟೀಲ್ ಅವರ ಕಾಲದಿಂದಲೂ ಕಾಂಗ್ರೆಸ್ ನವರಿಗೆ ಅವಳಿ ನಗರದ ಜನರಿಗೆ ನೀರು ಕೊಡಲು ಆಗಿಲ್ಲ. ಏನು ಮಾಡಿದರೂ ನಡೆಯುತ್ತೆ, ನಮ್ಮನ್ನ ಬಿಟ್ಟು ಯಾರಿಗೆ ಓಟ್ ಹಾಕುತ್ತಾರೆ ಅಂತಾ ಕ್ಷೇತ್ರದ ಜನರನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಎಚ್.ಕೆ.ಪಾಟೀಲ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಬೇಕು ಎಂದು ಪಲ್ಹಾದ್ ಜೋಶಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಎಸ್.ವಿ.ಸಂಕನೂರ, ಅನೀಲ್ ಮೆಣಸಿನಕಾಯಿ, ರಾಜು ಕುರುಡಗಿ, ಅಶೋಕ ಸಂಕಣ್ಣವರ, ರಾಜು ಗುಡಿಮನಿ, ಉಮೇಶ್ ಹುಬ್ಬಳ್ಳಿ, ವಸಂತಗೌಡ ಪೊಲೀಸ್ ಪಾಟೀಲ್, ಲೋಬೋಸಾ ಕಬಾಡಿ, ಮಂಜುನಾಥ ಕಬಾಡಿ, ನಾಗರಾಜ್ ಕಬಾಡಿ ಸೇರಿದಂತೆ ಹಲವರಿದ್ದರು.
ಕಾಂಗ್ರೆಸ್ ನ ದಬ್ಬಾಳಿಕೆ, ಗೂಂಡಾಗಿರಿಗೆ ಹೆದರದೇ ಗಟ್ಟಿಯಾಗಿ ಚುನಾವಣೆ ಎದುರಿಸಿ. ಯಾರಿಗೂ ಹೆದರಬೇಡಿ. ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತಿರುವ ಅನೀಲ್ ಮೆಣಸಿನಕಾಯಿ ಅವರನ್ನು ಈ ಬಾರಿ ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. – ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವರು