ಗದಗ: ಗದಗ-ಬೆಟಗೇರಿ ಜನಾರ್ಶೀವಾದದಿಂದ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ 50 ಕೋಟಿ ರೂ. ಅನುದಾನ ಕೊಡುತ್ತೇವೆಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವರಾದ ಸಿ.ಸಿ.ಪಾಟೀಲ್ ಅವರು ಮಾತು ಕೊಟ್ಟಿದ್ದರು. ನುಡಿದಂತೆ ಮೊದಲ ಹಂತದಲ್ಲಿ 40 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರೂ ಸ್ಥಳೀಯ ಶಾಸಕರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಹೇಳಿದರು.
ಸೋಮವಾರ 32ನೇ ವಾರ್ಡಿನ ಸರ್ವೋದಯ ನಗರ, ಹನುಮಾನ್ ಕಾಲನಿಯ ಪ್ರಮುಖರೊಂದಿಗೆ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಹಂತ-4ಕ್ಕೆ ಮೊದಲ ಹಂತದಲ್ಲಿ ರಾಜ್ಯ ಸರ್ಕಾರ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಅವಳಿ ನಗರದ ಎಲ್ಲ 35 ವಾರ್ಡ್ ಗಳಿಗೂ ಸಮಾನವಾಗಿ ತಲಾ 50 ಲಕ್ಷ ರೂ. ಅನುದಾನ ನೀಡಿದ್ದೇವೆ. ಸದರಿ ಕಾಮಗಾರಿಯ ಕ್ರಿಯಾಯೋಜನೆ ಅನುಮೋದನೆಗೊಂಡಿದ್ದರೂ ಸ್ಥಳೀಯ ಶಾಸಕರು ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯನ್ನುಂಟು ಮಾಡಿದರು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವ ಮೂಲಕ ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ತಕ್ಕಪಾಠ ಕಲಿಸಬೇಕು ಎಂದರು.
ಅವಳಿ ನಗರ ಅಭಿವೃದ್ಧಿಗೊಂಡರೆ ಬಿಜೆಪಿಗೆ ಕ್ರೆಡಿಟ್ ಹೋಗುತ್ತದೆ. ಇದರಿಂದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಹಿನ್ನಡೆಯಾಗುತ್ತದೆ ಎಂದು ಬೇಕಂತಲೇ ವಿಳಂಬ ನೀತಿ ಅನುಸರಿಸಿದರು. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 40 ಕೋಟಿ ರೂ. ಅನುದಾನವನ್ನು ಖರ್ಚು ಮಾಡಿದ್ದರೆ ಇಷ್ಟೊತ್ತಿಗೆ 100 ಕೋಟಿಯಷ್ಟು ಅನುದಾನ ಅವಳಿ ನಗರದ ಅಭಿವೃದ್ಧಿಗೆ ಬರುತ್ತಿತ್ತು. ಆದರೆ, ಗದಗ-ಬೆಟಗೇರಿ ಬಗ್ಗೆ ಕಾಳಜಿಯೇ ಇಲ್ಲದ ಶಾಸಕರು ಅಭಿವೃದ್ಧಿಪಡಿಸುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಅಧಿಕಾರದಲ್ಲಿದ್ದರೂ ಅಂದುಕೊಂಡಂತೆ
ಅಭಿವೃದ್ಧಿ ಕೆಲಸ ಮಾಡಲಾಗಲಿಲ್ಲವೆಂಬ ನೋವು ನಮಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ನಗರಸಭೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ವಾರ್ಡ್ ಗಳಿಗೆ ಅನುದಾನ ಮಾಡುವಲ್ಲಿ ತಾರತಮ್ಯ ಮಾಡಲುತ್ತಿತ್ತು. ಬಿಜೆಪಿ ಸದಸ್ಯರಿರುವ ವಾರ್ಡಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದರು.
ಇದರಿಂದಾಗಿ ಎಲ್ಲ 35 ವಾರ್ಡ್ಗಗಳಲ್ಲಿ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲದೇ ಶೋಚನೀಯ ಸ್ಥಿತಿಯಲ್ಲಿವೆ. ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಹೀಗಾಗಿ ಮೇ 13ರಂದು ನೀವೆಲ್ಲರೂ ವಿಜಯದ ಮಾಲೆ ಹಾಕಿದ ಒಂದು ತಿಂಗಳಲ್ಲೇ ಪ್ರತಿದಿನ ಕುಡಿಯಲು ತುಂಗಭದ್ರಾ ನದಿ ನೀರು ಹರಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ’ ಎಂದು ಅನೀಲ್ ಮೆಣಸಿನಕಾಯಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಮಾಜಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಬಿಜೆಪಿ ಗದಗ ಶಹರ ಘಟಕ ಅಧ್ಯಕ್ಷ ಅನೀಲ್ ಅಬ್ಬಿಗೇರಿ, ನಗರಸಭೆ ಸದಸ್ಯ ಪ್ರಕಾಶ್ ಅಂಗಡಿ, ಮುಖಂಡರಾದ ಪ್ರಕಾಶ್ ಬಾಕಳೆ, ವಿಠ್ಠಲ್ ಬಾಂಡಗೆ ಸೇರಿದಂತೆ ವಾರ್ಡಿನ ಪ್ರಮುಖರು, ಪಕ್ಷದ ಕಾರ್ಯಕರ್ತರು ಇದ್ದರು.