ನಿರಾಸಕ್ತಿ , ಅಸಡ್ಡೆ ತೋರದೇ ಅರ್ಹ ಮತದಾರರೆಲ್ಲ ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು : ಡಾ|| ಸುಶೀಲಾ ಬಿ 

ಸಮಗ್ರ ಪ್ರಭ ಸುದ್ದಿ
3 Min Read

ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತದಿಂದ ವೀರನಾರಾಯಣ ದೇವಸ್ಥಾನದವರೆಗೆ ಬೃಹತ್ ಕಾಲ್ನಡಿಗೆ

ಗದಗ  : ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ , ಜಿಲ್ಲಾಡಳಿತ ಜಿ.ಪಂ. ಸಹಯೋಗದಲ್ಲಿ ರವಿವಾರ ಜಿಲ್ಲಾಡಳಿತ ಭವನದ ಆವರಣದಿಂದ ವೀರನಾರಾಯಣ ದೇವಸ್ಥಾನದವರೆಗೆ ಸಾಂಪ್ರದಾಯಿಕ ಉಡುಗೆಯೊಂದಿಗೆ ಬೃಹತ್ ಕಾಲ್ನಡಿಗೆ ಜಾಥಾ ಏರ್ಪಡಿಸಲಾಯಿತು.

ಜಿಲ್ಲಾ ಸ್ವೀಪ್ ಸಮಿತಿ ಆದ್ಯಕ್ಷೆ ಡಾ. ಸುಶೀಲಾ ಬಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಸಹಿ ಅಭಿಯಾನ ಆರಂಭಿಸುವ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ. ಸುಶೀಲಾ ಬಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಪ್ರಮುಖವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇದೇ ಮೇ 10 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆಯವರೆಗೆ ಮತದಾನ ನಡೆಯಲಿದೆ. ನಿರಾಸಕ್ತಿ , ಅಸಡ್ಡೆ ತೋರದೇ ಅರ್ಹ ಮತದಾರರೆಲ್ಲ ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ಆ ಮೂಲಕ ಶೇ 100 ರಷ್ಟು ಮತದಾನ ದಾಖಲಾಗಬೇಕೆಂದರು.

ಜಿಲ್ಲಾ ಮತದಾರರ ಜಾಗೃತಿ ಕಾರ್ಯಕ್ರಮದ ರಾಯಭಾರಿ ಅಂತರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ ಮಾತನಾಡಿ ಮತದಾನ ನಮ್ಮ ಹಕ್ಕು ಅದನ್ನು ಮೇ 10 ರಂದು ತಪ್ಪದೇ ಅರ್ಹರಿಗೆ ಚಲಾಯಿಸೋಣ. ಮತದಾನ ಮಾಡದಿದ್ದರೂ ನಡೆಯುತ್ತದೆ ಎಂಬ ನಿರಾಸಕ್ತಿ, ಅಸಡ್ಡೆ ತೋರದೇ ತಾವು ಎಲ್ಲಿಯೇ ಇದ್ದರೂ ಮತದಾನದ ದಿನದಂದು ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಬೇಕು. ವಲಸೆ ಕುಟುಂಬಗಳ ಸದಸ್ಯರೂ ಸಹ ಸ್ವ ಗ್ರಾಮಕ್ಕೆ ಆಗಮಿಸಿ ಮತದಾನದ ಹಕ್ಕನ್ನು ಚಲಾಯಿಸುವಂತೆ ಕರೆ ನೀಡಿದರು.

ಜಿಲ್ಲಾಡಳಿತ ಭವನದ ಆವರಣದಿಂದ ಆರಂಭವಾದ ಬೃಹತ್ ಕಾಲ್ನಡಿಗೆ ಜಾಥಾ ಕೋರ್ಟ ಸರ್ಕಲ್ ಮಾರ್ಗವಾಗಿ ಒಕ್ಕಲಗೇರಿ ನಗರದ ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. 5 ಕ್ಕೆ ತಲುಪಿತು. ಅಲ್ಲಿ ಮತದಾನದ ಧ್ವಜಾರೋಹಣ ನೆರವೇರಿಸಿ ನೆರೆದ ಸಾರ್ವಜನಿಕರೆಲ್ಲರಿಗೂ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಬೀದಿ ನಾಟಕ ಕಲಾವಿದರಿಂದ ಸ್ಥಳೀಯ ಶೈಲಿಯಲ್ಲಿ ಮನಮುಟ್ಟುವಂತೆ ಮತದಾನದ ಜಾಗೃತಿ ಮೂಡಿಸಲಾಯಿತು. ನಂತರ ಕಾಲ್ನಡಿಗೆ ಜಾಆಥಾವು ರಾಚೋಟಿ ವೀರಭದ್ರೇಶ್ವರ ದೇವಸ್ಥಾನದ ಮಾರ್ಗವಾಗಿ ಬಾಲಕರ ಕನ್ನಡ 3ನೇ ನಂಬರ್ ಶಾಲೆ ತಲುಪಿತು. ಅಲ್ಲಿ ಧ್ವಜಾರೋಹಣ ನೆರವೇರಿಸಿ ಶ್ರೀ ಕುಮಾರವ್ಯಾಸ ರಸ್ತೆ ಮೂಲಕ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.2 ತಲುಪಿ ಕಾಲ್ನಡಿಗೆ ಜಾಥಾವು ಸಂಪನ್ನಗೊಂಡಿತು.

ಜಾಥಾ ಉದ್ದಕ್ಕೂ ಸಶಸ್ತ್ರ ಸೀಮಾ ಬಲದ ಪಡೆಯಿಂದ ಪರೇಡ , ಮಹಿಳೆಯರಿಂದ ಕುಂಭಮೇಳ, ಜಿಲ್ಲಾ ಪೊಲೀಸ ಇಲಾಖೆಯ ಬ್ಯಾಂಡ್ ಸದ್ದಿನೊಂದಿಗೆ ಜಾಥಾ ಯಶಸ್ವಿಯಾಯಿತು. ಜಾಥಾ ಉದ್ದಕ್ಕೂ ಧ್ವನಿ ವರ್ಧಕದ ಮೂಲಕ ಮತದಾನದ ಘೋಷವಾಕ್ಯಗಳನ್ನು ಹಾಗೂ ಮತದಾನ ಜಾಗೃತಿ ಗೀತೆಗಳು ಮೂಡಿ ಬಂದವು. ಜಿಲ್ಲಾಡಳಿತ ಭವನ ಆವರಣದಲ್ಲಿ ತಳಿರು ತೋರಣಗಳಿಂದ ಮುಖ್ಯ ದ್ವಾರವನ್ನು ಅಲಂಕರಿಸಲಾಗಿತ್ತು. ಮಹಿಳೆಯರಿಂದ ಭಿನ್ನ ಭಿನ್ನವಾದ ಆಕರ್ಷಕ ರಂಗೋಲಿ ಮೂಡಿ ಬಂದವು. ಗುಲಾಬಿ ಹೂವಿನಲ್ಲಿ ಕರ್ನಾಟಕದ ನಕ್ಷೆ ಹಾಗೂ ಚುನಾವಣೆ ಚಿಹ್ನೆ , ಮೇ 10 ಎಂಬ ಕಲೆಯ ಅನಾವರಣ ಗಮನ ಸೆಳೆಯಿತು.

ಗಮನ ಸೆಳೆದ ಸೆಲ್ಫಿ ಕಾರ್ನರ್ :

ಜಿಲ್ಲಾ ಪಂಚಾಯತ್ ಆವರಣದಲ್ಲಿ ಸ್ವೀಪ್ ಸಮಿತಿಯಿಂದ ತಯಾರಿಸಲಾದ ಚುನಾವಣಾ ಸೆಲ್ಫಿ ಕಾರ್ನರ್ ನೆರೆದ ಜನಸಮೂಹದ ಆಕರ್ಷಣೀಯ ಸ್ಥಳವಾಗಿತ್ತು. ಸಂಪ್ರದಾಯಿಕ ಉಡುಗೆ ತೊಟ್ಟು ಬಂದ ಅಧಿಕಾರಿ ಸಿಬ್ಬಂದಿಗಳು ಸೆಲ್ಫಿ ಕಾರ್ನರ್ ನಲ್ಲಿ ತಮ್ಮ ಫೋಟೋವನ್ನು ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.

ಜಾಥಾ ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಜೆ.ಸಿ. ಪ್ರಶಾಂತ, ಮುಖ್ಯ ಯೋಜನಾಧಿಕಾರಿ ವಾಗೀಶ , ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗಧೀಶ ನುಚ್ಚಿನ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಕ್ರೀಡಾಧಿಕಾರಿ ವಿಠಲ ಜಾಬಗೌಡ್ರ , ವಾರ್ತಾಧಿಕಾರಿ ವಸಂತ ಮಡ್ಲೂರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ನೌಕರರ ಸಂಘದ ಅಧ್ಯಕ್ಷ ರವಿ ಗುಂಜೀಕರ್, ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಸಶಸ್ತ್ರ ಸೇನಾ ಬಲದ ಸೈನಿಕರು , ಮಾಜಿ ಸೈನಿಕರು ಹಾಜರಿದ್ದರು.

Share this Article