ಗದಗ: ಪ್ರಧಾನಿ ನರೇಂದ್ರ ಮೋದಿಜಿಯವರ ಭಾರತ ಸದೃಢವಾಗುತ್ತಿದೆ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಕೇಂದ್ರ ಸರ್ಕಾರ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದು, 2028ರ ವೇಳೆಗೆ ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಲಿದೆ ಎಂದು ಉದ್ಯಮಿ ಆನಂದ ಸಂಕೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ನಗರದ ಕವಳಿಕೆರೆ ಜಿನ್ ನಲ್ಲಿ ಆಯೋಜಿಸಿದ್ದ ಗದಗ-ಬೆಟಗೇರಿ ಅವಳಿ ನಗರದ ಹೋಲ್ ಸೇಲ್ ಆ್ಯಂಡ್ ರಿಟೇಲ್ ವ್ಯಾಪಾರಸ್ಥರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮೋದಿಯವರ 5 ಟ್ರಿಲಿಯನ್ ಕನಸಿಗೆ ರಾಜ್ಯ ಸರ್ಕಾರವು ಕೊಡುಗೆ ನೀಡಲು ಹಲವು ಯೋಜನೆಗಳನ್ನು ರೂಪಿಸಿದೆ. ಗುಜರಾತ್ ನಂತೆ ದೇಶವನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯಲು ಮೋದಿಯವರು ಅವಿರತ ಶ್ರಮಿಸುತ್ತಿದ್ದಾರೆ.
ದೇಶದಲ್ಲಿ ಜಿಎಸ್ಟಿ ಜಾರಿಯಿಂದ ವ್ಯಾಪರಸ್ಥರಿಗೆ ತುಂಬಾ ಅನುಕೂಲವಾಗಿದೆ. ಜಿಎಸ್ಟಿ ಬಳಿಕ 7 ಲಕ್ಷ ವಿಆರ್ಎಲ್ ಗ್ರಾಹಕರು ಹೆಚ್ಚಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರದ ನಿರ್ಧಾರವೇ ಕಾರಣ ಎಂದರು.
ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನೀಲ್ ಮೆಣಸಿನಕಾಯಿ ಅವರು ಉತ್ತಮ ಜನಸೇವಕರು. ಕ್ಷೇತ್ರದ ಜನರ ಸೇವೆ ಮಾಡಲು ಉತ್ಸುಕರಾಗಿದ್ದಾರೆ. ಅಲ್ಲದೇ, ಗದಗ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಒಳ್ಳೆಯ ದೂರದೃಷ್ಟಿ ಹೊಂದಿದ್ದಾರೆ. ಗದಗನಲ್ಲಿ ಹಲವು ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣವಿದೆ. ಬೇಕಾಗುವ ಎಲ್ಲ ಸೌಲಭ್ಯಗಳು ದೊರೆಯಲಿವೆ. ಹೀಗಾಗಿ ಅನೀಲ್ ಮೆಣಸಿನಕಾಯಿ ಅವರು ಇಂಡಸ್ಟ್ರಿಯಲ್ ಕ್ಲಸ್ಟರ್ ಸ್ಥಾಪನೆಗೆ ಉದ್ದೇಶಿಸಿದ್ದಾರೆ ಎಂದು ತಿಳಿಸಿದರು.
ಗದಗ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸಿರುವ ಅನೀಲ್ ಮೆಣಸಿನಕಾಯಿ ಅವರ ಗೆಲುವಿಗಾಗಿ ಎಲ್ಲರೂ ಒಮ್ಮನಸ್ಸಿನಿಂದ ಕೆಲಸ ಮಾಡಬೇಕು. ಮನೆ ಮನೆಗೆ ತೆರಳಿ ವ್ಯಾಪಕ ಪ್ರಚಾರ ಕೈಗೊಂಡು, ಒಬ್ಬರು ನೂರು ಮತಗಳನ್ನು ಹಾಕಿಸುವಷ್ಟು ಶಕ್ತಿವಂತರಾಗಬೇಕು. ಕಳೆದ ಬಾರಿ ಕಡಿಮೆ ಮತಗಳಿಂದ ಸೋಲುಂಡಿರುವ ಅನೀಲ್ ಮೆಣಸಿನಕಾಯಿ ಅವರನ್ನು ಈ ಬಾರಿ ಬಹುಮತಗಳಿಂದ ಗೆಲ್ಲಿಸಬೇಕು ಎಂದು ಆನಂದ ಸಂಕೇಶ್ವರ ಮನವಿ ಮಾಡಿಕೊಂಡರು.
ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಮಾತನಾಡಿ, ಕ್ಷೇತ್ರದ ಜನರು ಐವತ್ತೈದು ವರ್ಷಗಳ ಕಾಲ ಮತ ನೀಡಿ ಶಕ್ತಿ ಕೊಟ್ಟರೂ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಲಿಲ್ಲ. ಜವಳಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಸಚಿವರಿದ್ದಾಗ ಗದಗ ಮತಕ್ಷೇತ್ರಕ್ಕೆ ಸ್ಥಳೀಯ ಕಾಂಗ್ರೆಸ್ ಶಾಸಕರ ಕೊಡುಗೆ ಶೂನ್ಯವಾಗಿದೆ. ಹೀಗಾಗಿ ವಂಶಪಾರಂಪರಿಕ ಕಾಜಕಾರಣ ಕೊನೆಗಾಣಿಸಿ, ಅಭಿವೃದ್ಧಿ ಪರ ಪಕ್ಷವನ್ನು ಬೆಂಬಲಿಸಿ ಕಾಂಗ್ರೆಸ್ ಮುಕ್ತ ಗದಗ ಮಾಡಲು ಕ್ಷೇತ್ರದ ಜನ ತೀರ್ಮಾನಿಸಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕರು ಗದುಗಿಗೆ ನಿರಂತರ ಅನ್ಯಾಯವೆಸುತ್ತಾ ಬಂದಿದ್ದು, ಅವರಿಗೆ ಮತ ಕೇಳುವ ನೈತಿಕತೆ ಇಲ್ಲ. ಕ್ಷೇತ್ರದಲ್ಲಿ ಯಾವುದೇ ದೂರದೃಷ್ಟಿ ಇಲ್ಲದೇ ಅವೈಜ್ಞಾನಿಕ ಕೆಲಸ ಮಾಡಿ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಿದ್ದಾರೆ. ಉಸಿರುಗಟ್ಟಿಸಿದ ರೀತಿಯಲ್ಲಿ ಗದಗ-ಬೆಟಗೇರಿ ಅವಳಿ ನಗರವನ್ನಿಟ್ಟಿದ್ದಾರೆ. ಬಡವರಿಗೆ ಸರದಕಾರದ ಯೋಜನೆಗಳನ್ನು ತಲುಪಿಸಲಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಎಪಿಎಂಸಿ ವ್ಯವಸ್ಥೆ ಹಾಳು ಮಾಡಿ ರೈತರನ್ನು ಒಕ್ಕಲೆಬ್ಬಿಸಿದರು. ಗದಗ ಮಾರುಕಟ್ಟೆ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದರು ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ, ಮೂಲಭೂತ ಸೌಕರ್ಯ, ಕಾರ್ಖಾನೆ ಸ್ಥಾಪನೆ, ಆಯುರ್ವೇದಿಕ್ ಹಬ್, ಸ್ಪೋರ್ಟ್ಸ್ ಸಿಟಿ ನಿರ್ಮಾಣದ ಗುರಿ ಹೊಂದಿದ್ದೇನೆ. ಅಲ್ಲದೇ, ರಿಂಗ್ ರೋಡ್ ಅಭಿವೃದ್ಧಿಗೊಂಡ ಬಳಿಕ ರಿಯಲ್ ಎಸ್ಟೇಟ್ ಉದ್ಯಮ, ವ್ಯಾಪಾರ ವಹಿವಾಟುವಿಗೆ ಮತ್ತಷ್ಟು ಸಹಕಾರಿಯಾಗಲಿದೆ. ಅಲ್ಲದೇ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇನ್ನೂ ಅನೇಕ ಕನಸುಗಳನ್ನು ಕಂಡಿರುವ ನನಗೆ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಸಂಗಮೇಶ ದುಂದೂರ, ಪ್ರಕಾಶ್ ಅಂಗಡಿ, ರಾಘವೇಂದ್ರ ಯೞವತ್ತಿ, ವಿಜಯಲಕ್ಷ್ಮಿ ಮಾನ್ವಿ, ಮಂಜುನಾಥ ವೀರಲಿಂಗಾಯತಮಠ, ಜಯಂತಿ ಕವಾಡ, ನರೇಶ್ ಜೈನ್, ಧೀರಜ್ ಕುಮಾರ್, ಪ್ರದೀಪ್ ಕೊಡೆಕಲ್, ರಾಜೇಶ್ ಜೀರಾವಾಲ, ಕಮಲೇಶ್ ಜೀರಾವಾಲ ಸೇರಿದಂತೆ ಹೋಲ್ ಸೇಲ್ ಆ್ಯಂಡ್ ರಿಟೇಲ್ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.