ಈ ಗುಲಾಬಿಯೂ ನಿಮಗಾಗಿ, ನಿಮ್ಮ ಮತದಾನವು ದೇಶಕ್ಕಾಗಿ : ರೈಲ್ವೇ ನಿಲ್ದಾಣದಲ್ಲಿ ಗುಲಾಬಿ ಹೂವು ನೀಡಿ ಮತದಾರರ ಜಾಗೃತಿ
ಗದಗ : ಪ್ರಯಾಣಿಕರ ಗಮನಕ್ಕೆ ಮೇ 10 ರಂದು ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಲಿದ್ದು, ತಾವೇಲ್ಲರೂ ತಪ್ಪದೇ ಮತದಾನ ಮಾಡಿ ದೇಶದ ಅಭಿವೃದ್ಧಿಗೆ ನಿಮ್ಮದೇ ಆದ ಕೊಡುಗೆ ನೀಡಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಬಿ. ಸುಶೀಲಾ ಅವರು ರೈಲ್ವೆ ನಿಲ್ದಾಣದಲ್ಲಿ ಮೈಕಲ್ಲಿ ಅನೌನ್ಸ್ ಮಾಡುವ ಮೂಲಕ ಪ್ರಯಾಣಿಕರಿಗೆ ಕಡ್ಡಾಯ ಮತದಾನಕ್ಕೆ ಕರೆ ನೀಡಿದರು.
ದೂರದ ಊರಿನಿಂದ ರೈಲಿನಲ್ಲಿ ಪ್ರಯಾಣಿಸಿ ರೈಲು ನಿಲ್ದಾಣದಿಂದ ಹೊರ ಬರುತ್ತಿರುವ ಪ್ರಯಾಣಿಕರಿಗೆ ಹಾಗೂ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಗುಲಾಬಿ ಹೂವು ನೀಡುವ ಮೂಲಕ ವಿಭಿನ್ನವಾಗಿ ಮತದಾನ ಜಾಗೃತಿ ಮೂಡಿಸಿದರು.
ಗದಗ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ.ಬಿ. ಸುಶೀಲಾ ಅವರ ಕಲ್ಪನೆ ಅಡಿಯಲ್ಲಿ ಇಂತಹ ನೂತನ ಹಾಗೂ ವಿಶಿಷ್ಟ ಪೂರ್ಣ ಮತದಾನ ಜಾಗೃತಿ ಕಾರ್ಯಕ್ರಮ ಗದಗ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಡ್ಡಾಯ ಮತದಾನ ಜಾಗೃತಿಗಾಗಿ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಗಳ ಆಶ್ರಯದಲ್ಲಿ ರೇಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಡ್ಡಾಯ ಮತದಾನಕ್ಕಾಗಿ ನಿಮಗಿದು ಗುಲಾಬಿ.. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನರೇಗಾ ಯೋಜನೆಯಡಿ ಹೂವುಗಳನ್ನು ಬೆಳೆದ ಮುಂಡರಗಿ ರೈತನ ಬಳಿ 1000 ಕ್ಕೂ ಹೆಚ್ಚು ಗುಲಾಬಿ ಹೂವುಗಳನ್ನು ಖರೀದಿಸಿ. ಅವುಗಳನ್ನು ಸಿಬ್ಬಂದಿಗಳ ಜೊತೆಗೂಡಿ ಪ್ರಯಾಣಿಕರಿಗೆ ಹಂಚಿ ಮತದಾನ ಜಾಗೃತಿ ಮೂಡಿಸಿದರು.
ನಂತರ ಗದಗ ಜಿಲ್ಲಾ ಚುನಾವಣಾ ರಾಯಭಾರಿ ಆಗಿರುವ ಅಂತರಾಷ್ಟ್ರೀಯ ಕುಸ್ತಿ ಕ್ರೀಡಾಪಟು ಕುಮಾರಿ ಪ್ರೇಮಾ ಹುಚ್ಚಣ್ಣವರ ಜೊತೆಗೂಡಿ ರೈಲ್ವೆ ನಿಲ್ದಾಣದ ಮೈಕ್ ಮೂಲಕ ಅನೌನ್ಸ್ ಮಾಡಿದ ಅವರು ಪ್ರಯಾಣಿಕರ ಗಮನಕ್ಕೆ ಮೇ 10 ರಂದು ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೆ ಮತದಾನ ನಡೆಯಲಿದ್ದು ತಾವೇಲ್ಲರೂ ತಪ್ಪದೇ ಮತದಾನ ಮಾಡಿ ದೇಶದ ಅಭಿವೃದ್ಧಿಗೆ ನಿಮ್ಮದೇ ಆದ ಕೊಡುಗೆ ನೀಡಿ, ಮತದಾನ ನಮ್ಮ ಸಂವಿದಾನ ನೀಡಿರುವ ಒಂದು ವರ ಅದನ್ನು ಹಬ್ಬದ ಸಂಭ್ರಮಾಚರಣೆಯಂದು ಭಾವಿಸಿ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಒಳ್ಳೆಯ ನಾಳೆಗಳು ನಿಮ್ಮದಾಗುತ್ತವೇ. ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರ ನಮ್ಮ ದೇಶ, ಭಾರತದ ಸಂವಿಧಾನ ಜಾತಿ, ಧರ್ಮ, ಬಡವ ಶ್ರೀಮಂತ ಎನ್ನದೇ ಎಲ್ಲರಿಗೂ ಸಮಾನತೆ ಯಿಂದ ಮತ ಚಲಾಯಿಸುವ ಹಕ್ಕು ನೀಡಿದೆ. 18 ವರ್ಷ ತುಂಬಿದ ಎಲ್ಲಾ ವಯಸ್ಕ ಪ್ರೌಡ ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಸಾಮಾನ್ಯವಾಗಿ ಚುನಾವಣೆಯ ಗುಪ್ತ ಮತದಾನ ಪದ್ಧತಿ ಮೂಲಕ ನಡೆಯುವಂತಹದ್ದು, ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ರೂಪಿಸಿರುವ ವ್ಯವಸ್ಥೆ ಇದಾಗಿದೆ. ಇಂತಹ ಅತ್ಯುತಮ ವ್ಯವಸ್ಥೆಯಲ್ಲಿ ಭಾರತೀಯ ಪ್ರಜೆಗಳಾದ ನಾವು ಪ್ರಭುದ್ಧತೆಯಿಂದ ಅಮೂಲ್ಯವಾದ ಮತವನ್ನು ಮೇ 10 ರಂದು ಎಲ್ಲರೂ ತಪ್ಪದೇ ಮತ ಚಲಾಯಿಸಿ,100% ಪ್ರತಿಶತ ಮತದಾನ ಗದಗ ಜಿಲ್ಲೆಯ ವಾಗ್ದಾನವಾಗಿದೆ. ಆ ವಾಗ್ದಾನವನ್ನು ಯಶಸ್ವಿಯಾಗಿ ಎಲ್ಲರೂ ಪೂರೈಸೋಣ ಎಂದು ಮನವಿ ಮಾಡಿದರು.
ಮತ್ತೊಂದೆಡೆ ನಗರದ ಪುಟ್ಟರಾಜ ಬಸ್ ನಿಲ್ದಾಣದಲ್ಲಿ ಜಿಲ್ಲಾ ಸ್ವಿಪ್ ಸಮಿತಿ ಸಹಯೋಗದೊಂದಿಗೆ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಯಿಂದಲೂ ಸಹ ಬೇರೆ ಊರಿಗೆ ಹೊರಟ ಹಾಗೂ ಬಸ್ ನಿಲ್ದಾಣದಲ್ಲಿ ಕುಳಿತ ಪ್ರಯಾಣಿಕರಿಗೆ ಹೂವು ಕೊಡುವ ಮೂಲಕ ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ, ಮುಖ್ಯ ಲೆಕ್ಕಾಧಿಕಾರಿ ಜೆ.ಸಿ. ಪ್ರಶಾಂತ, ಕ್ರೀಡಾಧಿಕಾರಿ ವಿಠಲ ಜಾಬಗೌಡ್ರ, ಜಿಲ್ಲೆಯ ಎಲ್ಲಾ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳು, ಹಾಗೂ ಸಹಾಯಕ ನಿರ್ದೇಶಕರು ಸೇರಿದಂತೆ ತಾಲೂಕ ಪಂಚಾಯತ ಸಿಬ್ಬಂದಿಗಳು, ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಹಾಗೂ ಜಿಮ್ಸ್ ವಿಧ್ಯಾರ್ಥಿಗಳು ಹಾಜರಿದ್ದರು.
ರೈಲು ನಿಲ್ದಾಣದಲ್ಲಿ ಕುಳಿತ ಪ್ರಯಾಣಿಕರಿಗೆ ಸಿಬ್ಬಂದಿಗಳ ಜೊತೆಗೆ ಸೇರಿ ಹೂವು ಕೊಟ್ಟು ಕುಶಲೋಪರಿ ವಿಚಾರಿಸಿದ ಜಿ. ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೂವು ಕೊಡುವ ಮೂಲಕ ನಿಮ್ಮ ಊರು ಯಾವುದು..? ನೀವು ಎಲ್ಲೆ ಇದ್ದರು ಪರವಾಗಿಲ್ಲಾ ಮೇ 10 ರಂದು ನಿಮ್ಮ ಗ್ರಾಮಕ್ಕೆ ಹೋಗಿ ಕಡ್ಡಾಯವಾಗಿ ಮತದಾನ ಮಾಡಿ ಅಂತಾ ಕೇಳಿಕೊಂಡರು. ಈ ಸಂದರ್ಭದಲ್ಲಿ ಕೆಲವು ಜನರು ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಜೊತೆಗೆ ಸೆಲ್ಪೀ ತಗೆಸಿಕೊಂಡಿದ್ದು ವಿಶೇಷವಾಗಿತ್ತು.